ಸಿಂಹ, ಎಚ್ ಎಲ್ ಎನ್
	1904-72. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ.  ಇವರು 1904ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜನಿಸಿದರು. ಲಕ್ಷ್ಮೀನರಸಿಂಹ ಎಂಬುದು ಇವರ ಹುಟ್ಟು ಹೆಸರು. ಇವರ ತಂದೆ ಎಚ್. ನರಸಿಂಹಯ್ಯನವರು ಸರ್ಕಾರಿ ಉದ್ಯೋಗದಲ್ಲಿದ್ದರು. ಸಿಂಹ ಅವರಿಗೆ ಬಾಲ್ಯದಿಂದಲೂ ನಾಟಕ ಕಲೆಯ ಬಗ್ಗೆ ವ್ಯಾಮೋಹ. ಮೆತೋಡಿಸ್ಟ್ ಮಿಷನ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಇವರಿಗೆ ಶಾಲಾ ನಾಟಕವೊಂದರಲ್ಲಿ ಅಭಿನಯಿಸಲು ದೊರೆತ ಅವಕಾಶ ತಪ್ಪಿಹೋಯಿತು. ಆಗ ಇವರು ರೊಚ್ಚಿನಿಂದ ಶಾಲಾ ಪ್ರಾರ್ಥನಾ ಸಭೆಯಲ್ಲಿಯೇ ಕುಳಿತು ಡೆಸ್ಟಿನಿ ರೂಲ್ಸ್ ಹ್ಯುಮ್ಯಾನಿಟಿ ಎಂಬ ನಾಟಕವನ್ನು ಇಂಗ್ಲಿಷಿನಲ್ಲಿ ಬರೆದು ಅಂದೇ ಅಭ್ಯಸಿಸಿ ಅಭಿನಯಿಸಿದರು. ಇವರ ಸಹಪಾಠಿ ಮಹಮದ್ ಪೀರ್ ಅವರೂ ಈ ನಾಟಕದಲ್ಲಿ ಪಾತ್ರವಹಿಸಿದ್ದರು. ಶಾಲೆಯ ಪ್ರಿನ್ಸಿಪಾಲ್ ರೆವೆರೆಂಡ್ ಸ್ಪೆನ್ಸರ್ಸ್ ಅವರು ಸಿಂಹ ಅವರ ಪ್ರತಿಭೆಯನ್ನು ಮೆಚ್ಚಿಕೊಂಡರು. ಅಭಿನಯ ಶಿರೋಮಣಿ ವರದಾಚಾರ್ಯರ ನಾಟಕಗಳನ್ನು ನೋಡಿದ ಅನಂತರ ಇವರಿಗೆ ನಾಟಕಗಳಲ್ಲಿ ಹೆಚ್ಚು ಆಸಕ್ತಿ ಬಲಿಯಿತು. ಚನ್ನಪಟ್ಟಣದ ಗುರಿಕಾರ್ ಅವರ ಭಾರತ ಜನಮನೋಲ್ಲಾಸಿನಿ ಎಂಬ ನಾಟಕ ಸಂಸ್ಥೆ ಪ್ರದರ್ಶಿಸುತ್ತಿದ್ದ ನಾಟಕಗಳನ್ನು ವೀಕ್ಷಿಸಿ ತಮ್ಮನ್ನು ನಾಟಕರಂಗಕ್ಕೇ ಅರ್ಪಿಸಿಕೊಳ್ಳಲು ನಿಶ್ಚಯಿಸಿದರು. ಈ ಕಂಪನಿಯಲ್ಲಿ ಮಹಮದ್ ಪೀರ್ ಅವರು ನಿರ್ವಹಿಸುತ್ತಿದ್ದ ಹಾಸ್ಯಪಾತ್ರಗಳು ಇವರ ಆಸಕ್ತಿಯನ್ನು ಪೂರ್ಣವಾಗಿ ಕೆರಳಿಸಿದವು. ಕೆಲಕಾಲ ಭಾರತ ಜನಮನೋಲ್ಲಾಸಿನಿ ಕಂಪನಿಯಲ್ಲಿ ಸೇವೆಗೈದರು. ಅನಂತರ ಸಿ.ಬಿ. ಮಲ್ಲಪ್ಪನವರ ಕಂಪನಿ ಹಾಗೂ ಗುಬ್ಬಿ ಕಂಪನಿಯಲ್ಲಿ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳತೊಡಗಿದರು. ಈ ವೇಳೆಗಾಗಲೇ ಮಹಮದ್ ಪೀರ್ ಪ್ರತಿಭೆ, ಉತ್ಸಾಹ, ಆದರ್ಶಗಳು ಇವರನ್ನು ಪ್ರಬಲವಾಗಿ ಆಕರ್ಷಿಸಿದ್ದು ಪೀರರ ಸ್ವಂತ ಸಂಸ್ಥೆಯಾದ ಚಂದ್ರಕಲಾ ನಾಟಕ ಮಂಡಳಿಗೆ ಪದಾರ್ಪಣ ಮಾಡಿದರು. ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸುವಂಥ ಮೂರೂವರೆ ಗಂಟೆಗಳ ಅವಧಿಯ ಸಾಮಾಜಿಕ ನಾಟಕವೊಂದನ್ನು ಈ ಕಂಪನಿಗೆ ರಚಿಸಿಕೊಡಲು ತೀರ್ಮಾನಿಸಿ 1931ರಲ್ಲಿ ಸಂಸಾರನೌಕ ಎಂಬ ಸಾಮಾಜಿಕ ನಾಟಕವನ್ನು ಬರೆದು ಪೂರ್ಣಗೊಳಿಸಿದರು. ಇದು ವೃತ್ತಿರಂಗದಲ್ಲಿ ಸರ್ವತ್ರ ವಿಜಯಗಳಿಸಿದ ಮೊದಲ ನಾಟಕವೆನಿಸಿತು. ಈ ನಾಟಕದಲ್ಲಿ ಮಾಧುವಾಗಿ ಇವರೂ ಸುಂದರನಾಗಿ ಪೀರ್ ಅವರೂ ಅಭಿನಯಿಸಿ ಸಂಗೀತ ಬಾಹುಳ್ಯದ ದೃಢಮುಷ್ಠಿಯಿಂದ ಕೂಡಿದ್ದ ವೃತ್ತಿರಂಗವನ್ನು ಗದ್ಯ ನಾಟಕಗಳ ಕಡೆ ತಿರುಗಿಸಿದರು. ಕಂಪನಿಯ ಜನಪ್ರಿಯ ನಾಟಕಗಳೆನಿಸಿದ್ದ ಸಾಮ್ರಾಟ್ ಷಾಜಹಾನ್ ಮತ್ತು ಗೌತಮಬುದ್ಧ ನಾಟಕಗಳಲ್ಲಿ ಷಾಜಹಾನ್ ಮತ್ತು ಚೆನ್ನನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಕಣ್ಣಲ್ಲಿ ಶಕ್ತಿಶಾಲಿ ನಟ ಎನಿಸಿಕೊಂಡರು. ಸಂಸಾರನೌಕ ಕನ್ನಡದಲ್ಲಿ ಅದ್ಭುತ ವಿಜಯಗಳಿಸಿತಲ್ಲದೆ ತಮಿಳಿಗೂ ಭಾಷಾಂತರಗೊಂಡಿತು. ತಮಿಳುನಾಡಿನಲ್ಲಿ ನೂರಾರು ಬಾರಿ ಯಶಸ್ವಿಯಾಗಿ ಪ್ರದರ್ಶಿತವಾಯಿತು. ದಾಕ್ಷಿಣಾತ್ಯ ಚಿತ್ರರಂಗದ ಪ್ರಥಮ ಸಾಮಾಜಿಕ ಚಲನಚಿತ್ರವಾಗಿಯೂ ಇದು ನಿರ್ಮಾಣವಾಯಿತು (1936).

	ಮಹಮದ್ ಪೀರ್ ಅವರ ಮಂಡಳಿಯಲ್ಲಿ ಕೆಲವು ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತಂದ ಅನಂತರ ತಮ್ಮದೇ ಆದ ಸಿಂಹಾಸ್ ಸೆಲೆಕ್ಟ್ ಆರ್ಟಿಸ್ಟ್ಸ್ ಎಂಬ ನಾಟಕ ವೃಂದವನ್ನು ಕಟ್ಟಿ ಸಂಸಾರನೌಕ, ಅಬ್ಬಾ ಆ ಹುಡುಗಿ, ಷಾಜಹಾನ್ ಮೊದಲಾದ ನಾಟಕಗಳನ್ನು ಕರ್ನಾಟಕಾದ್ಯಂತ ಪ್ರದರ್ಶಿಸತೊಡಗಿದರು. ಷಾಜಹಾನ್ ನಾಟಕವಂತೂ ಅಪಾರ ಜನಪ್ರಿಯತೆ ಗಳಿಸಿತು. ಅಂದು ಕನ್ನಡದ ಅತ್ಯಂತ ಪ್ರಸಾರದ ಜನಪ್ರಿಯ ದಿನಪತ್ರಿಕೆ ಎನಿಸಿದ್ದ ವಿಶ್ವಕರ್ನಾಟಕದ ಸಂಪಾದಕರೂ ಸಂಶೋಧಕರೂ ಸಾಹಿತಿಗಳೂ ಆದ ತಿ.ತಾ. ಶರ್ಮರು ಷಾಜಹಾನ್ ಪಾತ್ರಧಾರಿಗಳಾದ ಸಿಂಹ ಅವರು ಯಾವ ದೇಶಕ್ಕೆ ಆಗಲಿ ಭೂಷಣಪ್ರಾಯರು. ಕನ್ನಡಿಗರನೇಕರಿಗೂ ಈ ಪಾತ್ರಚೂಡಾಮಣಿಗಳು ಕಣ್ಣಿಗೆ ಬೀಳದಿದ್ದುದು ಅವರ ದುರದೃಷ್ಟ ವಲ್ಲ-ಕನ್ನಡ ಜನತೆಯ ದುರದೃಷ್ಟ ಎಂದು ಆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದರು.

	ಇವರ ಹಲವಾರು ಸಾಧನೆಗಳಲ್ಲಿ ಚಿತ್ರರಂಗವೂ ಒಂದು. ಮದರಾಸಿನ ದೇವಿ ಫಿಲಂಸ್ ಅವರಿಂದ ನಿರ್ಮಾಣವಾದ ಸಂಸಾರನೌಕ ಇವರು ನಿರ್ದೇಶಿಸಿದ ಮೊದಲ ಕನ್ನಡ ಚಿತ್ರ. ಈ ಚಿತ್ರದ ಮುಖಾಂತರ ಬಿ.ಆರ್. ಪಂತಲು, ಎಂ.ವಿ. ರಾಜಮ್ಮ, ಡಿಕ್ಕಿಮಾಧವರಾವ್, ಎಂ.ಎಸ್. ಮಾಧವರಾವ್ (ತಮಾಷ) ಮೊದಲಾದವರು ಪ್ರಸಿದ್ಧರಾದರು. ಮದರಾಸಿನ ಎ.ವಿ.ಎಂ., ಗುಬ್ಬಿ, ಕರ್ನಾಟಕ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಾಣವಾದ ಗುಣಸಾಗರಿ ಎಂಬ ಕನ್ನಡ ಚಿತ್ರಕ್ಕೆ ಚಿತ್ರಸಾಹಿತ್ಯ, ನಿರ್ದೇಶನಗಳ ಹೊಣೆಯನ್ನು ಹೊತ್ತವರು ಇವರೇ. ಅನಂತರ ಬೇಡರ ಕಣ್ಣಪ್ಪ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್ ಅವರಂಥ ಸತ್ತ್ವಶಾಲಿ ನಟನೊಬ್ಬನನ್ನು ಕೊಡುಗೆಯಾಗಿತ್ತರು. ರಾಜಕುಮಾರರ ಪ್ರತಿಭೆಯನ್ನು ರಂಗಭೂಮಿಯ ಮೇಲೆ ಮೊದಲೇ ಗುರುತಿಸಿದ್ದ ಇವರು ಬೇಡರ ಕಣ್ಣಪ್ಪ ಚಿತ್ರದ ನಾಯಕ ಕಣ್ಣಪ್ಪನ ಪಾತ್ರಕ್ಕೆ ಆಯ್ಕೆಮಾಡಿದರು. ಬೇಡರ ಕಣ್ಣಪ್ಪ ತೆಲುಗಿನಲ್ಲೂ ಹಿಂದಿಯಲ್ಲೂ ಇವರ ನಿರ್ದೇಶನದಲ್ಲೇ ನಿರ್ಮಾಣಗೊಂಡಿತು. ಅನಂತರ ಸ್ವಂತ ಸಂಸ್ಥೆ ಸ್ಥಾಪಿಸಿ ಅಬ್ಬಾ ಆ ಹುಡುಗಿ ಚಿತ್ರ ನಿರ್ದೇಶಿಸಿದರು. ಪಂಢರಿಬಾಯಿ ಅವರ ಸ್ವಂತ ಚಿತ್ರ ತೇಜಸ್ವಿನಿಯ ನಿರ್ದೇಶನದ ಹೊಣೆ ಹೊತ್ತವರೂ ಇವರೇ. ಅನುಗ್ರಹ ಇವರು ನಿರ್ದೇಶಿಸಿದ ಕಡೆಯ ಚಿತ್ರ. ರತ್ನಹಾರ ಎಂಬ ಸ್ವಂತ ಚಿತ್ರದ ಸಿದ್ಧತೆಯಲ್ಲಿರುವಾಗಲೇ ಇವರು 1972 ಜುಲೈ 2ರಂದು ನಿಧನ ಹೊಂದಿದರು. 1969ರಲ್ಲಿ ಇವರಿಗೆ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿತು. 2004ರಲ್ಲಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗಳು ಇವರ ಜನ್ಮಶತಾಬ್ದಿಯನ್ನು ಆಚರಿಸಿದವು.				
	(ಎಸ್.ಎಚ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ